eshTu saahasavantha

ಎಷ್ಟು ಸಾಹಸವಂತ ನೀನೆ ಬಲವಂತ
ದಿಟ್ಟ ಮೂರುತಿ ಭಳಿರೆ ಭಳಿರೆ ಹನುಮಂತ /ಪ/

ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆಗಳ
ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೊ /ಅನುಪ/

ರಾಮರಪ್ಪಣೆಯಿಂದ ಶರಧಿಯ ದಾಟಿ
ಆ ಮಹಾ ಲಂಕೆಯ ಕಂಡೆ ಕಿರೀಟ
ಸ್ವಾಮಿಕಾರ್ಯವನು ಪ್ರೇಮದಿ ನಡೆಸಿದೆ
ಈ ಮಹಿಯೊಳು ನಿನಗಾರೈ ಸಾಟಿ /೧/

ದೂರದಿಂದಸುರನ ಪುರವನೆ ನೋಡಿ
ಭರದಿ ಶ್ರೀರಾಮರ ಸ್ಮರಣೆಯ ಮಾಡಿ
ಹಾರಿದೆ ಹರುಷದಿ ಸಂಹರಿಸಿ ಲಂಕಿಣಿಯನು
ವಾರಿಜಮುಖಿಯನು ಕಂಡು ಮಾತಾಡಿ /೨/

ರಾಮರ ಕ್ಷೇಮವ ರಮಣಿಗೆ ಪೇಳಿ
ತಾಮಸ ಮಾಡದೆ ಮುದ್ರಿಕೆ ನೀಡಿ
ಪ್ರೇಮದಿಂ ಜಾನಕಿ ಕುರುಹನು ಕೊಡಲಾಗ
ಆ ಮಹಾ ವನದೊಳು ಫಲವನು ಬೇಡಿ /೩/

ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು
ಹಣ್ಣಿನ ನೆವದಲಿ ಅಸುರರ ಹೊಯ್ದು
ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ
ಬಣ್ಣಿಸಿ ಅಸುರರ ಬಲವನು ಮುರಿದು /೪/

ಶೃಂಗಾರ ವನದೊಳಗೆ ಇದ್ದ ರಕ್ಕಸರ
ಅಂಗವನಳಿಸಿದೆ ಅತಿರಣಶೂರ
ನುಂಗಿ ಅಸ್ತ್ರಗಳ ಅಕ್ಷಯ ಕುವರನ
ಭಂಗಿಸಿ ಬಿಸುಟಿಯೊ ಬಂದ ರಕ್ಕಸರ /೫/

ದೂರ ಪೇಳಿದರೆಲ್ಲ ರಾವಣನೊಡನೆ
ಚೀರುತ್ತ ಕರೆಸಿದ ಇಂದ್ರಜಿತುವನೆ
ಚೋರಕಪಿಯನು ನೀ ಹಿಡಿತಹುದೆನ್ನುತ
ಶೂರರ ಕಳುಹಿದ ನಿಜಸುತನೊಡನೆ /೬/

ಪಿಡಿದನು ಇಂದ್ರಜಿತು ಕಡುಕೋಪದಿಂದ
ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ
ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ
ನಡೆದನು ಲಂಕೆಯ ಒಡೆಯನಿದ್ದೆಡೆಗೆ /೭/

ಕಂಡನು ರಾವಣನುದ್ದಂಡ ಕಪಿಯನು
ಮಂಡೆಯ ತೂಗುತ್ತ ಮಾತಾಡಿಸಿದನು
ಭಂಡು ಮಾಡದೆ ಬಿಡೆನೋಡು ಕಪಿಯೆನೆ
ಗಂಡುಗಲಿಯು ದುರಿದುರಿಸಿ ನೋಡಿದನು /೮/

ಛಲವ್ಯಾಕೊ ನಿನಗಿಷ್ಟು ಎಲವೊ ಕೋಡಗನೆ
ನೆಲೆಯಾವುದು ಹೇಳೊ ನಿನ್ನೊಡೆಯನೆಸರನ್ನು
ಬಲವಂತ ರಾಮರ ಬಂಟ ಬಂದಿಹೆನೊ
ಹಲವು ಮಾತ್ಯಾಕೊ ಹನುಮನು ನಾನೆ /೯/

ಬಡ ರಾವಣನೆ ನಿನ್ನ ಬಡಿದು ಹಾಕುವೆನೊ
ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೊ
ಹುಡಿಯೇಳಿಸುವೆನು ಖುಲ್ಲ ರಕ್ಕಸನೆ
ತೊಡೆವೆನೊ ನಿನ್ನ ಪಣೆಯ ಅಕ್ಷರವ /೧೦/

ನಿನ್ನಂಥ ದೂತರು ರಾಮನ ಬಳಿಯೊಳು
ಇನ್ನೆಷ್ಟು ಮಂದಿ ಉಂಟು ಹೇಳೊ ನೀ ತ್ವರದಿ
ನನ್ನಂಥ ದೂತರು ನಿನ್ನಂಥ ಪ್ರೇತರು
ಇನ್ನೂರು ಮುನ್ನೂರು ಕೋಟಿ ಕೇಳಯ್ಯ /೧೧/

ಕಡು ಕೋಪದಿಂದಲಿ ಖೂಳರಾವಣನು
ಸುಡಿರೆಂದ ಬಾಲವ ಸುತ್ತಿ ವಸನವ
ಒಡೆಯನ ಮಾತಿಗೆ ತಡೆಬಡೆಯಿಲ್ಲದೆ
ಒಡನೆ ಮುತ್ತಿದರು ಗಡಿಮನೆಯವರು /೧೨/

ತಂದರು ವಸನವ ತಂಡತಂಡದಲಿ
ಒಂದೊಂದು ಮೂಟೆ ಎಂಬತ್ತು ಕೋಟಿಯಲಿ
ಚಂದದಿ ಹರಳಿನ ತೈಲದೊಳದ್ದಿ
ನಿಂದ ಹನುಮನು ಬಾಲವ ಬೆಳೆಸುತ /೧೩/

ಶಾಲು ಸಕಲಾತಿಯು ಸಾಲದೆಯಿರಲು
ಬಾಲೆರ ವಸ್ತ್ರವ ಸೆಳೆದುತಾರೆನಲು
ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ
ಕಾಲಮೃತ್ಯುವ ಕೆಣಕಿದರಲ್ಲಿ /೧೪/

ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ
ಇಣುಕಿನೋಡುತ ಅಸುರರ ಅಣಕಿಸುತ
ಝಣಝಣಝಣರೆನೆ ಬಾಲದಗಂಟೆಯು
ಮನದಿ ಶ್ರೀರಾಮರ ಪಾದವ ನೆನೆಯುತ /೧೫/

ಮಂಗಳಂ ಶ್ರೀರಾಮಚಂದ್ರ ಮೂರುತಿಗೆ
ಮಂಗಳಂ ಸೀತಾದೇವಿ ಚರಣಂಗಳಿಗೆ
ಮಂಗಳವೆನುತ ಲಂಕೆಯ ಸುಟ್ಟು
ಲಂಘಿಸಿ ಅಸುರನ ಗಡ್ಡಕೆ ಹಿಡಿದ /೧೬/

ಹೊತ್ತಿತು ಅಸುರನ ಗಡ್ಡ ಮೀಸೆಗಳು
ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು
ಚಿತ್ತದಿ ರಾಮರು ಕೊಪಿಸುವರು ಎಂದು
ಚಿತ್ತದಿ ನಡೆದನು ಅರಸನಿದ್ದೆಡೆಗೆ /೧೭/

ಸೀತೆಯ ಕ್ಷೇಮವ ರಾಮರಿಗೇಳಿ
ಪ್ರೀತಿಯಿಂ ಕೊಟ್ಟಕುರುಹ ಕರದಲ್ಲಿ
ಸೇತುವೆ ಕಟ್ಟಿ ಚತುರಂಗ ಬಲಸಹ
ಮುತ್ತಿತು ಲಂಕೆಯ ಸೂರೆಗೈಯುತಲಿ /೧೮/

ವೆಗ್ಗಳವಾಯಿತು ರಾಮರ ದಂಡು
ಮುತ್ತಿತು ಲಂಕೆಯ ಕೋಟೆಯ ಕಂಡು
ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ
ಝಗ್ಗನೆ ಪೇಳ್ದರು ರಾವಣಗಂದು /೧೯/

ರಾವಣ ಮೊದಲಾದ ರಾಕ್ಷಸರ ಕೊಂದು
ಭಾವಶುದ್ಧದಲಿ ವಿಭೀಷಣ ಬಾಳೆಂದು
ದೇವಿ ಸೀತೆಯನೊಡಗೊಂಡು ಅಯೋಧ್ಯದಿ
ದೇವ ಶ್ರೀರಾಮರು ರಾಜ್ಯವಾಳಿದರು /೨೦/

ಶಂಖದೈತ್ಯನ ಕೊಂದೆ ಶರಣು ಶರಣಯ್ಯ
ಶಂಖಗಿರಿಯಲಿ ನಿಂದ ಹನುಮಂತರಾಯ
ಪಂಕಜಾಕ್ಷ ಹಯವದನನ ಕಟಾಕ್ಷದಿ
ಬಿಂಕದಿ ಪಡೆದೆಯೊ ಅಜನಪದವಿಯ /೨೧/

Audio Link: https://www.youtube.com/watch?v=MuFzP2mD56A

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s