ugaadi

ಯುಗಾದಿ

bevu bella

ಯುಗಾದಿ ಚೈತ್ರ ಮಾಸದ ಮೊದಲ ದಿನ. ಭಾರತದ ಅನೇಕ ಕಡೆಗಳಲ್ಲ್ಲಿ ಈ ದಿನ ಹೊಸ ವರ್ಷದ ಮೊದಲ ದಿನ. ಹೊಸ ವರ್ಷದ ಹಬ್ಬವಾಗಿ ಯುಗಾದಿಯನ್ನು ಆಚರಿಸಲಾಗುತ್ತದೆ. “ಯುಗಾದಿ” ಪದದ ವ್ಯುತ್ಪತ್ತಿ “ಯುಗ+ಆದಿ” – ಹೊಸ ಯುಗದ ಆರಂಭ, ಎಂದು.

ಯುಗಾದಿ ಹಬ್ಬದ ಸಾಂಪ್ರದಾಯಿಕ ಆಚರಣೆಗಳಲ್ಲಿ ಕೆಲವೆಂದರೆ ಸೂರ್ಯ ನಮಸ್ಕಾರ, ಪಂಚಾಂಗದ ಪೂಜೆ, ಹಾಗೂ ಸರ್ವೇ-ಸಾಮಾನ್ಯವಾಗಿ “ಬೇವು-ಬೆಲ್ಲ.” ಜೀವನದ ಸಿಹಿ-ಕಹಿಗಳೆರಡನ್ನೂ ಪಡೆಯಬೇಕೆಂದು ನೆನಪಿಸಲು ಬೇವು-ಬೆಲ್ಲಗಳ ಮಿಶ್ರಣವನ್ನು ತಿನ್ನಲಾಗುತ್ತದೆ.

ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಾಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ.

ಭೂಮಿಯಿಂದ ನೋಡಿದಾಗ, ಸೂರ್ಯ, ಚಂದ್ರ, ಗ್ರಹಗಳು ನಕ್ಷತ್ರಮಂಡಲದಿಂದಾದ ರಾಶಿಚಕ್ರದಲ್ಲಿ ದಿನೇ ದಿನೇ ಸ್ವಲ್ಪ ಸ್ವಲ್ಪವಾಗಿ ಸಂಚರಿಸಿದಂತೆ ಕಾಣುತ್ತವೆ. ವೇದಾಂಗ ಜ್ಯೋತಿಷದಂತೆ, ಮೊದಲ ನಕ್ಷತ್ರ ಅಶ್ವಿನಿ – ಅಂದರೆ ಮೇಷ ರಾಶಿಯ ೦ – ೧೩:೨೦ ಭಾಗ(ಡಿಗ್ರಿ). ಅಲ್ಲಿ ಸೂರ್ಯನಿದ್ದಾಗ ಭೂಮಿಯ ಉತ್ತರಾರ್ಧಗೋಳದಲ್ಲಿ ಸಸ್ಯಗಳಲ್ಲಿ ಚಿಗುರು ಕಾಣುತ್ತದೆ; ಅಂದರೆ ಹೊಸಹುಟ್ಟು. ಆದ್ದರಿಂದ ಅಶ್ವಿನೀ ನಕ್ಷತ್ರಕ್ಕೆ ರವಿಯು ಪ್ರವೇಶಿಸುವ ಕಾಲವನ್ನು ಹೊಸವರ್ಷ ಎಂದು ಪರಿಗಣಿಸುತ್ತಾರೆ. ಇದೇ ಸೌರಮಾನ ಯುಗಾದಿ. ಸಾಮಾನ್ಯವಾಗಿ ಈಗ ಇದು ಏಪ್ರಿಲ್ ೧೪ ಅಥವಾ ೧೫ ನೇ ತಾರೀಖಿಗೆ ಬೀಳುತ್ತದೆ. ಆದರೆ ಚಂದ್ರನ ಗತಿ ಅತಿವೇಗವಾದ್ದರಿಂದ ಪ್ರತಿ ಪ್ರದಕ್ಷಿಣೆಗೂ ಒಂದೊಂದು ತಿಂಗಳಾಗಿ, ಹನ್ನೆರಡು ಪ್ರದಕ್ಷಿಣೆಗಳಿಗೆ ಸರಿಯಾಗಿ ಒಂದು ಚಾಂದ್ರಮಾನ ಸಂವತ್ಸರವಾಗುತ್ತದೆ. ರವಿಚಂದ್ರರ ಗತಿಯನ್ನವಲಂಬಿಸಿ, ೧೧ ರಿಂದ ೧೩ ಪೂರ್ಣಿಮೆ/ಅಮಾವಾಸ್ಯೆಗಳಿಗೊಂದು ಚಾಂದ್ರಮಾನ ಯುಗಾದಿಯಾಗುತ್ತದೆ. ಈ ಯುಗಾದಿನಿರ್ಣಯದ ಹಿಂದೆ ವೇದಾಂಗ ಜ್ಯೋತಿಷದ ಮಹತ್ತರ ಸಾಧನೆಗಳೇ ಅಡಗಿವೆ; ಅದರಿಂದ ನಮ್ಮ ಪೂರ್ವಿಕರ ಖಗೋಲಗಣಿತದ ಅಪಾರ ಜ್ಞಾನ ವ್ಯಕ್ತವಾಗುತ್ತದೆ.

ಆಧ್ಯಾತ್ಮಿಕ ಕಾರಣ

ಪುರಾಣದ ಪ್ರಕಾರ ಬ್ರಹ್ಮ ದೇವ ಯುಗಾದಿಯ ದಿನದಿಂದ ಅಂದರೆ ಚೈತ್ರ ಶುದ್ಧದ ದಿನ ಲೋಕದ ಸೃಷ್ಟಿ ಪ್ರಾರಂಭಿಸಿದಂತೆ. ಹಿಂದು ಜನಾಂಗಕ್ಕೆ ಯುಗಾದಿಯ ದಿನದಿಂದ ಹೊಸ ವರ್ಷ ಪ್ರಾರಂಭವಾಗುತ್ತದೆ. ಹಿಂದೂ ಕ್ಯಾಲೆಂಡರ್ ಸಹ ಇಂದಿನಿಂದಲೇ ಶುರುವಾಗುತ್ತದೆ. ಹೊಸ ಪಂಚಾಗ ಸಹ ಇಂದಿನಿಂದಲೇ ಪ್ರಾರಂಭವಾಗುತ್ತದೆ.

ಮಾರ್ಗಶೀರ್ಷ ಮಾಸದ ಹೋಳಿ ಹುಣ್ಣಿಮೆಯಾದ ೧೫ ದಿನಗಳಿಗೆ ಬರುವುದು ಯುಗಾದಿ. ಯುಗ ಎಂದರೆ ಅದೊಂದು ಕಾಲಗಣನೆ. ತ್ರೇತಾಯುಗ, ಕೃತಯುಗ, ದ್ವಾಪರಯುಗ, ಕಲಿಯುಗಗಳಿಗೆ ಯುಇಗವೆಂದರೆ ೫೦೦೦ಕ್ಕೂ ಹೆಚ್ಚಿನ ವರುಷಗಳಂತೆ. ಆದರೆ ಇಲ್ಲಿ ಹಾಗಲ್ಲ. ಕಾಲದ ಒಂದು ಭಾಗ ಮತ್ತೆ ಪ್ರಾರಂಭವಾಗುತ್ತಿದೆ ಎಂಬುದರ ಸೂಚನೆಯಷ್ಟೆ. ವಸಂತ ಋತುವಿನಿಂದ ಪ್ರಾರಂಭಗೊಂಡ ಕಾಲಗಣನೆ ಶಿಶಿರದಲ್ಲಿ ಮುಕ್ತಾಯಗೊಂಡು ಮತ್ತೆ ವಸಂತ ಪ್ರಾರಂಭವಾಗುತ್ತಿರುವುದರ ಸೂಚನೆ. ಇಂತಹ ಯುಗದ ಅಂದರೆ ವರುಷದ ಮೊದಲನೆಯ ದಿನವನ್ನು ಯುಗಾದಿ ಎಂದು ಗುರುತಿಸಿ ಹಬ್ಬವನ್ನಾಗಿ ಆಚರಿಸುವರು.

ಚಾಂದ್ರಮಾನ ಪಂಚಾಂಗ ರೀತ್ಯಾ ಚೈತ್ರ ಮಾಸದ ಶುದ್ಧ ಪಾಡ್ಯದ ದಿನದಂದು ಬ್ರಹ್ಮ ಈ ಲೋಕವನ್ನು ಸೃಷ್ಟಿಸಿದ ಎಂಬ ಪ್ರತೀತಿ ಇದೆ. ಇಂದೇ ಸೂರ್ಯನು ತನ್ನ ಮೊದಲ ಕಿರಣವನ್ನು ಭೂಮಿಯ ಮೇಲೆ ಹರಿಸಿದ ಎಂಬ ಮಾತೂ ಇದೆ. ಇವೆಲ್ಲವೂ ಇಂದು ನಂಬಲಶಕ್ಯ. ಆದರೂ ಮುಂದಿನ ಪೀಳಿಗೆಗೆ ಇದರ ಬಗ್ಗೆ ಸ್ವಲ್ಪವಾದರೂ ತಿಳಿದಿರಲಿ ಎಂದು ಹೇಳಬೇಕಿದೆ. ಇಂದಿನ ದಿನದಿಂದ ಚೈತ್ರ ಮಾಸ ಪ್ರಾರಂಭವಾಗಿ ತರು ಲತೆಗಳು ಚಿಗುರುತ್ತವೆ. ಹೊಸ ಹೊಸ ಹೂಗಳು ಕಂಪನ್ನು ಬೀರುತ್ತವೆ. ಹಳೆಯ ತರಗೆಲೆಗಳು ಉದುರಿ ಗಿಡ ಮರಗಳು ಮತ್ತೆ ಮರಳಿ ಹೊಸ ಚೈತನ್ಯ ಪಡೆಯುತ್ತವೆ. ಜೀವನದಲ್ಲಿ ಒಂದು ವರುಷಗಳಲ್ಲಿ ಕಂಡ ಸುಖ ದು:ಖಗಳನ್ನು ಮರೆತು ಹೊಸ ಬಾಳನ್ನು ಪುಸ್ತಕದ ಹೊಸ ಪುಟದಂತೆ ಪ್ರಾರಂಭಿಸುವ ಸೂಚನೆಯ ಈ ದಿನವನ್ನು ಹಬ್ಬವನ್ನಾಗಿ ಆಚರಿಸುತ್ತಾರೆ.

ಐತಿಹಾಸಿಕ ಕಾರಣ

ಈ ದಿನದಂದು ರಾಮನು ವಾಲಿಯನ್ನು ವಧಿಸಿದನು. ದುಷ್ಟ ಪ್ರವೃತ್ತಿಯ ರಾಕ್ಷಸರನ್ನು ಹಾಗೂ ರಾವಣನನ್ನು ವಧಿಸಿ ಭಗವಾನ ರಾಮಚಂದ್ರನು ಅಯೋಧ್ಯೆಗೆ ಹಿಂತಿರುಗಿದ್ದು ಇದೇ ದಿನ. ಅದೇ ರೀತಿ ಇದೇ ದಿನದಂದು ರಾವಣವಧೆಯ ನಂತರ ಅಯೋಧ್ಯೆಗೆ ಹಿಂತಿರುಗಿದ ರಾಮನ ವಿಜಯದ ಹಾಗೂ ಆನಂದದ ಪ್ರತೀಕವೆಂದು ಮನೆಮನೆಗಳಲ್ಲಿ ಬ್ರಹ್ಮಧ್ವಜವನ್ನು ಏರಿಸಿದರು. ವಿಜಯದ ಪ್ರತೀಕವು ಎತ್ತರದಲ್ಲಿರುತ್ತದೆ. ಹಾಗಾಗಿ ಬ್ರಹ್ಮಧ್ವಜ ಎತ್ತರದಲ್ಲಿರುತ್ತದೆ. ಈ ದಿನದಿಂದಲೇ ‘ಶಾಲಿವಾಹನ ಶಕೆ’ ಪ್ರಾರಂಭವಾಯಿತು, ಏಕೆಂದರೆ ಈ ದಿನ ಶಾಲಿವಾಹನನು ಶತ್ರುಗಳ ಮೇಲೆ ವಿಜಯವನ್ನು ಪಡೆದನು.

ಹಬ್ಬದ ಆಚರಣೆಯ ವಿಧಾನ

ಈ ಹಬ್ಬವನ್ನು ಹೆಚ್ಚಾಗಿ ಆಂಧ್ರಪ್ರದೇಶ, ಕರ್ನಾಟಕ ಮತ್ತು ಮಹಾರಾಷ್ಟ್ರಗಳಲ್ಲಿ ಆಚರಿಸುವರು. ಆಂಧ್ರ ಮತ್ತು ಕರ್ನಾಟಕಗಳಲ್ಲಿ ಇದು ಯುಗಾದಿಯಾದರೆ, ಮಹಾರಾಷ್ಟ್ರದಲ್ಲಿ ಗುಡಿಪಡ್ವ. ಪಾಡ್ಯಮಿ ದಿವಸ ಗುಡಿಯನ್ನು ಏರಿಸುವುದೇ ಗುಡಿಪಡ್ವ – ಒಂದು ಕೋಲಿಗೆ ವಸ್ತ್ರವನ್ನು ಕಟ್ಟಿ, ಹೂವಿನ ಹಾರವನ್ನು ಏರಿಸಿ ‘ಗುಡಿ’ ಎಂದು ಮೂಲೆಯಲ್ಲಿ ಇರಿಸುವರು. ಇದು ಹೊಸ ವರುಷದ ಆಗಮನಕ್ಕೆ ಬಾವುಟವನ್ನು ಹಾರಿಸುವುದರ ಸಂಕೇತ. ಆಂಧ್ರ ಪ್ರದೇಶದಲ್ಲಿ ಹುಣಿಸೇಹಣ್ಣು, ಬೆಲ್ಲ, ಮಾವಿನಕಾಯಿ, ಉಪ್ಪು, ಮೆಣಸು, ಬೇವು ಇತ್ಯಾದಿಗಳ ಮಿಶ್ರಣ ಮಾಡಿ ಯುಗಾದಿ ಪಚ್ಚಡಿ ಎಂಬ ಹೆಸರಿನ ಪದಾರ್ಥವನ್ನು ಸೇವಿಸುವರು. ಅಂದು ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಇರುವುದು.

ಅಭ್ಯಂಗಸ್ನಾನ: ಯುಗಾದಿ ಪಾಡ್ಯದ ದಿನ ಬೆಳಗ್ಗೆ ಬೇಗನೆ ಎದ್ದು ಮೊದಲು ಅಭ್ಯಂಗಸ್ನಾನ ಮಾಡಬೇಕು. ಅಭ್ಯಂಗಸ್ನಾನವನ್ನು ಮಾಡುವಾಗ ‘ದೇಶಕಾಲಕಥನ’ ಮಾಡಬೇಕು.‘ ದೇಶಕಾಲಕಥನ’ ದಿಂದ ಅಹಂ ಕಡಿಮೆಯಾಗಲು ಸಹಾಯವಾಗುತ್ತದೆ.

ತೋರಣವನ್ನು ಕಟ್ಟುವುದು: ಸ್ನಾನದ ಬಳಿಕ ಮಾವಿನ ಎಲೆಯ ತೋರಣವನ್ನು ತಯಾರಿಸಿ ಕೆಂಪು ಹೂವುಗಳೊಂದಿಗೆ ಎಲ್ಲ ಬಾಗಿಲುಗಳಿಗೆ ಕಟ್ಟಬೇಕು. ಏಕೆಂದರೆ ಕೆಂಪು ಬಣ್ಣ ಶುಭಸೂಚಕವಾಗಿದೆ. ಸಾತ್ತ್ವಿಕ ತೋರಣದಿಂದ ಚೈತನ್ಯ ಪ್ರಕ್ಷೇಪಿತವಾಗಿ ಸಂರಕ್ಷಣಾಕವಚ ನಿರ್ಮಾಣವಾಗುತ್ತದೆ.

ತಳಿರು ತೋರಣವನ್ನು (ಎಳೆಯ ಹಸಿರು ಮಾವಿನೆಲೆ ಮಧ್ಯೆ ಮಧ್ಯೆ ಬೇವಿನ ಎಲೆ ಹೂಗಳ ಗೊಂಚಲು) ಮನೆಗಳ ಮುಂಬಾಗಿಲಿಗೆ ಮತ್ತು ದೇವರ ಮನೆಯ ಬಾಗಿಲಿಗೆ ತಳಿರು ತೋರಣವಾಗಿ ಕಟ್ಟುವರು. ಮನೆಯ ಮುಂದೆ ಬಣ್ಣ ಬಣ್ಣದ ರಂಗೋಲಿಯನ್ನಿಡುವರು. ಮುಂಜಾನೆ ಬೇಗನೆದ್ದು ಅಭ್ಯಂಜನ (ಎಣ್ಣೆ ಸೀಗೇಕಾಯಿಯಿಂದ ತಲೆಯನ್ನು ತೊಳೆದುಕೊಳ್ಳುವುದು) ಮಾಡಿ ಪುಣ್ಯಾಹ ಮಂತ್ರಗಳನ್ನು ಉಚ್ಚರಿಸಿ ಮಾವಿನೆಲೆಯಿಂದ ಮನೆಯ ಎಲ್ಲ ಕಡೆ ಕಳಶದ ನೀರನ್ನು ಸಿಂಪಡಿಸುವರು. ನಂತರ ಹೊಸ ಬಟ್ಟೆ ಧರಿಸಿ ಪಂಚಾಂಗವನ್ನು ಮನೆಯ ಹಿರಿಯರು ಓದುವರು ಮತ್ತೆಲ್ಲರೂ ಅದನ್ನು ಕೇಳುವರು.

ಪಂಚಾಂಗ ಹಿಂದೂ ಸಂಪ್ರದಾಯದ ಕ್ಯಾಲೆಂಡರ್. ಇದು ದಿನಸೂಚಿಯಷ್ಟೆ ಅಲ್ಲದೇ ಆ ವರುಷದಲ್ಲಿ ಮಳೆ ಬೆಳೆ ಹೇಗಿದೆ, ರಾಶಿಫಲ, ಮದುವೆ ಉಪನಯನಗಳಿಗೆ ಒಳ್ಳೆಯ ಮುಹೂರ್ತಗಳು, ಒಟ್ಟರೆ ಜನಜೀವನದ ಸ್ಥಿತಿಯನ್ನು ಸೂಚಿಸಿರುವುದು. ಅಂದು ಹಿರಿಯ ಕಿರಿಯರೆಲ್ಲರೂ ಹೊಸ ಬಟ್ಟೆಗಳನ್ನು ಧರಿಸಿ ಸಂತೋಷದಿಂದ ಹಾಡಿ ನಲಿವರು. ಅಂದಿನ ವಿಶೇಷ ತಿನಿಸು – ಒಬ್ಬಟ್ಟು ಅಥವಾ ಹೋಳಿಗೆ. ತೆಂಗಿನಕಾಯಿಹೂರಣದಲ್ಲಿ ಮಾಡಿದ ಹೋಳಿಗೆ ಬಹಳ ದಿನ ಇರದೇ ಕೆಡುವುದೆಂದು ಬೇಳೆಯ ಹೂರಣದಲ್ಲಿ ಮಾಡುವರು. ಇದನ್ನೇ ಮರಾಠಿಯಲ್ಲಿ ಪೂರಣಪೋಳಿ ಎಂದು ಕರೆವರು. ಸಂಜೆಯ ವೇಳೆಯಲ್ಲಿ ಗುರು ಹಿರಿಯರ ಮನೆಗಳಿಗೆ ಹೋಗಿ ಅವರಿಗೆ ಕಾಲುಮುಟ್ಟಿ ನಮಸ್ಕರಿಸಿ ಅವರ ಆಶೀರ್ವಾದ ಪಡೆವರು. ಈಗೀಗ ಟಿವಿಯಲ್ಲಿ ಕವಿಗೋಷ್ಠಿಯೂ ಪ್ರಸಾರ ಮಾಡುವರು.

ಇನ್ನೊಂದು ವಿಶೇಷವೆಂದರೆ ಇದೇ ಸಮಯದಲ್ಲಿ ಮಕ್ಕಳಿಗೆ ಪರೀಕ್ಷೆಗಳಿರುವುದರಿಂದ, ಈ ನೆಪದಲ್ಲಾದರೂ ಹಿರಿಯರಿಗೆ ಬಗ್ಗಿ ನಮಸ್ಕರಿಸಿ ಅವರಿಂದ ಒಳ್ಳೆಯದಾಗಲೆಂಬ ಮಾತುಗಳನ್ನು ಸ್ವೀಕರಿಸುವ ಸಂದರ್ಭ ಒದಗಿಬರುವುದು. ಮನೆಯ ಹೆಂಗಸರು ಹೊಸದಾಗಿ ಬರುವ ಮಾವಿನಕಾಯಿಯಿಂದ ಉಪ್ಪಿನಕಾಯಿಯನ್ನು ಮಾಡುವರು.

ಬೇವು-ಬೆಲ್ಲ

ಯುಗಾದಿಯ ದಿನ ಸುಖದ ಸಂಕೇತವಾದ ಬೆಲ್ಲವನ್ನೂ ಮತ್ತು ಕಷ್ಟದ ಸಂಕೇತವಾದ ಬೇವನ್ನೂ ಸಮನಾಗಿ ಸ್ವೀಕರಿಸುವರು. ತಿಂದ ಮೇಲೆ ಬೆಲ್ಲವು ಹೊಟ್ಟೆಯೊಳಗೆ ಉರಿಯ ಅಥವಾ ಶಾಖವನ್ನು ಉಂಟು ಮಾಡಿದರೆ ಬೇವು ಆ ಉರಿಯ ಶಮನಕಾರಿ.

ಬೇವು- ಬೆಲ್ಲದ ಮಿಶ್ರಣವನ್ನು ತಿನ್ನುವಾಗ ಹೇಳುವ ಒಂದು ಶ್ಲೋಕ ಹೀಗಿದೆ:

ಶತಾಯು: ವಜ್ರದೇಹಾಯ ಸರ್ವಸಂಪತ್ಕರಾಯಚ |

ಸರ್ವಾರಿಷ್ಟ ವಿನಾಶಾಯ ನಿಂಬಕಂದಳ ಭಕ್ಷಣಂ ||

ಅದರರ್ಥ ಹೀಗಿದೆ – ನೂರು ವರುಷಗಳ ಆಯುಷ್ಯ, ಸದೃಢ ಆರೋಗ್ಯ, ಸಕಲ ಸಂಪತ್ತುಗಳ ಪ್ರಾಪ್ತಿಗಾಗಿಯೂ, ಸಕಲ ಅರಿಷ್ಟ ನಿವಾರಣೆಗಾಗಿಯೂ ಬೇವು ಬೆಲ್ಲ ಸೇವನೆ ಮಾಡುತ್ತೇನೆ.

ಪಂಚಾಂಗ ಶ್ರವಣ ಎಂದರೇನು ಮತ್ತು ಅದರ ಮಹತ್ವ ಏನು?

ಜ್ಯೋತಿಷಿಯ ಪೂಜೆಯನ್ನು ಮಾಡಿ ಅವರಿಂದ ಅಥವಾ ಉಪಾಧ್ಯಾಯರಿಂದ ಹೊಸ ವರ್ಷದ ಪಂಚಾಂಗವನ್ನು ಅರ್ಥಾತ್ ವರ್ಷಫಲದ ಶ್ರವಣವನ್ನು ಮಾಡಬೇಕು. ಈ ವರ್ಷಫಲದ ಶ್ರವಣದ ಫಲ ಹೇಳಲಾಗಿದೆ, ಅದು ಮುಂದಿನಂತಿದೆ. ತಿಥಿಯ ಶ್ರವಣದಿಂದ ಲಕ್ಷ್ಮೀಯು ಲಭಿಸುತ್ತಾಳೆ, ವಾರದ ಶ್ರವಣದಿಂದ ಆಯುಷ್ಯವು ವೃದ್ಧಿಯಾಗುತ್ತದೆ, ನಕ್ಷತ್ರಶ್ರವಣದಿಂದ ಪಾಪನಾಶ ವಾಗುತ್ತದೆ, ಯೋಗಶ್ರವಣದಿಂದ ರೋಗಗಳ ನಿವಾರಣೆಯಾಗುತ್ತದೆ, ಕರಣ ಶ್ರವಣದಿಂದ ಇಚ್ಛಿತ ಕಾರ್ಯವು ಸಾಧ್ಯವಾಗುತ್ತದೆ. ಇವು ಪಂಚಾಂಗ ಶ್ರವಣದ ಉತ್ತಮ ಫಲಗಳಾಗಿವೆ. ಇದರ ನಿತ್ಯಶ್ರವಣದಿಂದ ಗಂಗಾಸ್ನಾನದ ಫಲವು ಲಭಿಸುತ್ತದೆ.’

ದಾನ

ಯಾಚಕರಿಗೆ ಅನೇಕ ವಿಧದ ದಾನವನ್ನು ಕೊಡಬೇಕು, ಉದಾ. ಅರವಟ್ಟಿಗೆಯನ್ನು (ಜಲ ಮಂದಿರ) ನಿರ್ಮಿಸಿ ನೀರಿನ ದಾನವನ್ನು ಮಾಡಬೇಕು. ಇದರಿಂದ ಪಿತೃಗಳು ಸಂತುಷ್ಟರಾಗುತ್ತಾರೆ.

ಭೂಮಿಯನ್ನು ಊಳುವುದು

ಯುಗಾದಿಯಂದು ಭೂಮಿಯನ್ನು ಊಳಬೇಕು. ಭೂಮಿಯನ್ನು ಊಳುವಾಗ ಕೆಳಗಿನ ಮಣ್ಣು ಮೇಲೆ ಬರುತ್ತದೆ. ಮಣ್ಣಿನ ಸೂಕ್ಷ್ಮ-ಕಣಗಳ ಮೇಲೆ ಪ್ರಜಾಪತಿ ಲಹರಿಗಳ ಸಂಸ್ಕಾರವಾಗಿ ಬೀಜ ಮೊಳಕೆಯೊಡೆಯುವ ಭೂಮಿಯ ಸಾಮರ್ಥ್ಯವು ಅನೇಕ ಪಟ್ಟು ಹೆಚ್ಚಾಗುತ್ತದೆ. ಭೂಮಿಗೆ ಉಪಯೋಗಿಸಲ್ಪಡುವ ಸಲಕರಣೆ ಮತ್ತು ಎತ್ತುಗಳ ಮೇಲೆ ಪ್ರಜಾಪತಿ ಲಹರಿಗಳನ್ನು ಉತ್ಪನ್ನ ಮಾಡುವ ಮಂತ್ರಸಹಿತ ಅಕ್ಷತೆಗಳನ್ನು ಹಾಕಬೇಕು. ಹೊಲದಲ್ಲಿ (ಗದ್ದೆಯಲ್ಲಿ) ಕೆಲಸ ಮಾಡುವವರಿಗೆ ಹೊಸ ಬಟ್ಟೆಗಳನ್ನು ಕೊಡಬೇಕು. ಈ ದಿನ ಹೊಲದಲ್ಲಿ ಕೆಲಸ ಮಾಡುವ ಜನರ ಮತ್ತು ಎತ್ತುಗಳ ಭೋಜನದಲ್ಲಿ ಕುಂಬಳಕಾಯಿ, ಹೆಸರುಬೇಳೆ, ಅಕ್ಕಿ, ಹೂರಣ ಮುಂತಾದ ಪದಾರ್ಥಗಳಿರಬೇಕು.

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s