ಪಾಪ ಮತ್ತು ಪುಣ್ಯದ ಒಂದು ಚಿಂತನೆ

” ಯಮ ಮಾರ್ಗ – ಪುಣ್ಯ – ಪಾಪಗಳಿಗೆ ತಕ್ಕಂತೆ ಜನ್ಮ – ಒಂದು ಚಿಂತನೆ ”

( ಶ್ರೀ ಗರುಡದೇವರು ಕೇಳಿದ ಪ್ರಶ್ನೆಗೆ ಶ್ರೀ ಹರಿಯು ಕೊಟ್ಟ ಉತ್ತರ. ಈ ವಿಷಯವು ಗರುಡ ಪುರಾಣದಲ್ಲಿ ಉಲ್ಲೇಖಿತವಾಗಿದೆ )

ಮೃತನಾಗಿ ಪ್ರೇತತ್ವ ಹೊಂದಿದ ಚೇತನನೂ ಮೊದಲನೆಯ ದಿನ ಸ್ಥೂಲ ದೇಹವನ್ನು ಬಿಟ್ಟು ಕೇವಲ ಸೂಕ್ಷ್ಮ ದೇಹದಿಂದ ಕೂಡಿದವನಾಗಿ ಮೊದಲನೆಯ ” ಹತ್ತು ” ದಿನಗಳಲ್ಲಿ ಕೊಡಲ್ಪಟ್ಟ ಪಿಂಡ ಬಲಿಗಳಿಂದ ಉತ್ಪನ್ನವಾದ ಪೂರ್ಣವಾದ ಪ್ರೇತ ದೇಹದಿಂದ ಕೂಡಿದವನಾಗಿ ಅತ್ಯಧಿಕ ಹಸಿವೆಯಿಂದ ಕೂಡಿದವನಾಗಿ ” ಹತ್ತ ” ನೇ ದಿವಸ ಕೊಟ್ಟ ಪ್ರಭೂತ ಬಲಿಯನ್ನು ತಿಂದು; ” ಹನ್ನೊಂದನೆ ” ದಿನ ಮಾಡಿದ ” ಏಕೋದಿಷ್ಟ ” ಶ್ರಾದ್ಧಾನ್ನಗಳನ್ನು ಭುಂಜಿಸಿ; ” ಹನ್ನೆರಡ ” ನೆಯ ದಿನವೂ ಕರ್ತೃವಿನ ಮನೆಯ ಬಾಗಿಲಲ್ಲೇ ನಿಂತು ಅವನಿಂದ ಕೊಡಬಹುದಾದ ಶ್ರಾದ್ಧಾನ್ನವನ್ನು ಎದುರು ನೋಡುತ್ತಿರುತ್ತದೆ.

” ಹದಿಮೂರು ” ನೆಯ ದಿನದಿಂದ ಹಗಲೂ – ರಾತ್ರಿ ಸೇರಿ ಪ್ರತಿ ದಿನವೂ 247 ಯೋಜನಗಳಷ್ಟು ದೂರ ನಡೆದು ವರ್ಷದ ಕೊನೆಯಲ್ಲಿ ಅಂದರೆ ವರ್ಷಕ್ಕೆ 12 ದಿನಗಳು ಬಾಕಿ ಇರುವಂತೆ ಅಂದರೆ ವರ್ಷಕ್ಕೆ 12 ದಿನಗಳ ಮುಂಚಿತವಾಗಿ ಶ್ರೀ ಯಮಧರ್ಮರಾಜರ ಆಸ್ಥಾನವನ್ನು ಸೇರುತ್ತಾರೆ.

13ನೇ ದಿನ ಯಮದೂತರು ಪ್ರೇತಕ್ಕೆ ” ಪಾಶ ” ವನ್ನು ಹಾಕಿ ಅಲ್ಲಿಂದ ಮುಂದೆ ಶ್ರೀ ಯಮಧರ್ಮರಾಜರ ಸಮೀಪದ ವರೆಗೂ ಸೆಳೆದೊಯ್ಯುತ್ತಾರೆ.

ಪ್ರತಿ ನಿತ್ಯವೂ ಹಗಲೂ ರಾತ್ರಿ ನಿರಂತರವಾಗಿ ನಡೆಯುವುದರಿಂದ ಕಂಗೆಟ್ಟು ಹಸಿವು ಬಾಯಾರಿಕೆಗಳಿಂದ ನರಳುತ್ತಿರುತ್ತಾನೆ. ಆಯಾಸದಿಂದ ಆಕುಲಗೊಂಡ ಕಣ್ಗಳುಳ್ಳವನಾಗಿ ದುಃಖದಿಂದ ಪೀಡಿತನಾಗಿ ಅರಚಿಕೊಳ್ಳುತ್ತಲೇ ಮಾರ್ಗದ ಮಧ್ಯದಲ್ಲಿ ಬರುವ ಕತ್ತಿಯ ಅಳಗಿನಂತೆ ಹರಿತವಾದ ಎಲೆಗಳಿಂದ ಕೂಡಿದ ದಟ್ಟವಾದ ವೃಕ್ಷಗಳಿಂದ ಕೂಡಿದ ‘ ಅಸಿಪತ್ರವನ ” ಎಂಬ ಕಾಡನ್ನು ದಾಟಿಕೊಂಡು ವಾಯು ಮಾರ್ಗದಲ್ಲಿ ಸಂಚರಿಸುತ್ತಾ 27 ದಿನಗಳು ಕಳೆದು 28ನೇ ದಿನ್ದದಂದು ಮೊದಲು ” ಯಾಮ್ಯಪುರ ” ವನ್ನು ಸೇರುತ್ತಾನೆ.

ಈ ಪುರದಲ್ಲಿ ಪ್ರೇತಗಳ ಸಮೂಹವಿರುತ್ತದೆ. ನೋಡಲು ಬಹಳ ಆಕರ್ಷಕವಾಗಿರುವ ” ಪುಷ್ಫ ಭದ್ರಾ ” ಎಂಬ ನದಿಯೂ; ಅದರ ದಡದಲ್ಲಿ ಒಂದು ” ನ್ಯಗ್ರೋಧ ” ಅಥವಾ ” ಆಲದಮರ ” ವೂ ಇರುತ್ತದೆ. ಅಲ್ಲಿ ಪ್ರೇತವು ಯಮ ಕಿಂಕರರಿಂದ ಅಪ್ಪಣೆ ಪಡೆದು ವಿಶ್ರಾಂತಿಯನ್ನು ಪಡೆಯುತ್ತಾ ತನ್ನ ಹೆಂಡತಿ ( ಗಂಡ ) ಮಕ್ಕಳು ಸೌಖ್ಯವಾಗಿರುವಿಕೆಯನ್ನು ಸ್ಮರಣೆ ಮಾಡಿಕೊಂಡು; ತನ್ನ ಸ್ಥಿತಿಯನ್ನು ನೋಡಿಕೊಂಡು ದುಃಖಿತನಾಗಿ ಶ್ರಮ ಪೀಡಿತನಾಗಿ ಬಾಯಾರಿಕೆಯಿಂದ ಕೂಡಿ ಕರುಣಾಜನಕವಾದ ಮಾತುಗಳಿಂದ ಅರಚಿಕೊಳ್ಳುತ್ತಾನೆ.

ತಾನು ಹಿಂದೆ ಸಂಪಾದಿಸಿಟ್ಟ ಐಶ್ವರ್ಯ; ತಾನು ಅನುಭವಿಸಿದ ಸುಖಗಳು ತನ್ನ ಮನೆ ಮಕ್ಕಳು – ಹಣ – ಸೇವಕರು – ಸ್ನೇಹಿತರು – ತಾನು ತಂದು ಹಾಕುತ್ತಿದ್ದ ಧವಸ ಧಾನ್ಯಗಳು ಎಲ್ಲವನ್ನೂ ಸ್ಮರಿಸಿಕೊಂಡು ಅದಾವುದೂ ಈಗ ತನಗಿಲ್ಲ. ಈ ರೀತಿ ತಂದು ಹಾಕಿ ಪೋಷಿಸಿದ ಮಕ್ಕಳಾದರೂ ಇಂದು ತನ್ನ ಕಷ್ಟದಲ್ಲಿ ಹಸಿವು ಆರುವುದಕ್ಕೆ ಅನ್ನವನ್ನೂ, ದಾಹ ಶಾಂತಿಗೆ ತೀರ್ಥವನ್ನು ಕೊಡುವರೇ ಎಂದು ಎದುರು ನೋಡುತ್ತಾ ಇರುತ್ತದೆ.

ಇಡೀ ವರ್ಷ ಹಸಿವು ದಾಹಗಳಿರುವುದರಿಂದ ಅವುಗಳಿಗೆ ಪುತ್ರನು ( ಪುತ್ರರಿಲ್ಲದವರಿಗೆ ಅಳಿಯ ) ವರ್ಷ ವರ್ಷಾಬ್ಧಿಕ ಪರ್ಯಂತ ಒಂದು ವರ್ಷ ಕಾಲ ಪ್ರತಿ ನಿತ್ಯವೂ ತೀರ್ಥ ಪಾತ್ರೆ ಅಥವಾ ಉದುಕುಂಭ ಸಹಿತ ( ಸೋದಕುಂಭ ) ಶ್ರಾಧವನ್ನು ಮಾಡಲೇಬೇಕು.

ಪ್ರೇತವು ಮುಂದೆ ತನಗೆ ಶ್ರೀ ಯಮಧರ್ಮರಾಜರು ತಾನು ಮಾಡಿದ ಪುಣ್ಯ – ಪಾಪಗಳಿಗೆ ಅನುಗುಣವಾಗಿ ಯಾವ ಜನ್ಮವನ್ನು ಪಡೆಯಬೇಕೆಂದು ತೀರ್ಪನ್ನು ಕೊಡುತ್ತಾರೋ? ಯಾವ ತರಹದ ಪಾಪ ಕಾರ್ಯವನ್ನು ನಾನು ಮಾಡಿರುತ್ತೇನೆಯೋ? ಅಥವಾ ಯಾವ ತರಹದ ಪುಣ್ಯ ಕಾರ್ಯವನ್ನು ನಾನು ಮಾಡಿರುತ್ತೇನೆಯೋ?

ನನ್ನನ್ನು ದುಃಖದಿಂದ ಪಾರು ಮಾಡುವ ಪುತ್ರರು ಅಥವಾ ಬಂಧುಗಳು ಆದರೂ ಇದ್ದಾರೆಯೋ? ಎಂದು ಚಿಂತಿಸುತ್ತಾ ” ಯಮಪುರಿ ” ಗೆ ಕಾಲಿಡುತ್ತದೆ.

ಶ್ರೀ ಯಮಧರ್ಮರಾಜರ ಕಿಂಕರರಾದರೋ ನಿನ್ನನ್ನು ದುಃಖದಿಂದ ಪಾರು ಮಾಡುವ ಪುತ್ರಾದಿಗಳನ್ನು ಪಡೆಯುವ ಪುಣ್ಯವು ನಿನಗೆಲ್ಲಿದೆ? ಎಂದು ಹೀಯಾಳಿಸುತ್ತಿರುತ್ತಾರೆ.

ಅಷ್ಟರಲ್ಲಿ ಮತ್ತೆ ಕೆಲ ಶ್ರೀ ಯಮಧರ್ಮರಾಜರ ಕಿಂಕರರು 12 ಜನ ದ್ವಾರಪಾಲಕರೂ ಅವನ ಶುಭಾಶುಭ ಕರ್ಮಗಳನ್ನು ವಿಚಾರ ಮಾಡುತ್ತಲೇ ಬಂದು ಆ ಚೇತನವನ್ನು ಶ್ರೀ ಯಮಧರ್ಮರಾಜರ ಸಭೆಗೆ ಕರೆದೊಯ್ಯುತ್ತಾರೆ.

ಅಲ್ಲಿ ಮನುಷ್ಯರ ಎಲ್ಲ ವಿಧವಾದ ಚೇಷ್ಟೆಗಳನ್ನು ಅರಿಯಬಲ್ಲ ಶ್ರೀ ಬ್ರಹ್ಮದೇವರ ಪುತ್ರರಾದ ” ಶ್ರವಣ ” ದೇವತೆಗಳೆಂಬುವರು ಆ ಪ್ರೇತವು ಮೊದಲು ಮಾಡಿದ ” ಪುಣ್ಯ – ಪಾಪ ಕಾರ್ಯ ” ಗಳನ್ನು ತಿಳಿಸಿ, ಆ ಪ್ರೇತಕ್ಕೆ ಸದ್ಗತಿ ಸಿಗಲೆಂದು ಅದರ ಪುತ್ರಾದಿಗಳು ಮಾಡಿದ ದಾನ ಧರ್ಮಗಳ ವಿಷಯಗಳನ್ನೂ ವಿವರವಾಗಿ ” ಶ್ರೀ ಚಿತ್ರಗುಪ್ತ ” ರಿಗೆ ತಿಳಿಸುತ್ತಾರೆ. ಈ ಎಲ್ಲಾ ವಿಷಯಗಳನ್ನು ಒಟ್ಟಾಗಿ ಸಂಗ್ರಹಿಸಿ ” ಚಿತ್ರಗುಪ್ತ ” ರು ” ಶ್ರೀ ಯಮಧರ್ಮರಾಜ ” ರಿಗೆ ತಿಳಿಸುತ್ತಾರೆ.

ಶ್ರೀ ಯಮಧರ್ಮರಾಜರು ” ವಸು – ರುದ್ರ – ಆದಿತ್ಯ ” ರೆಂಬ ಪಿತೃಗಳ ಸನ್ನಿಧಾನದಲ್ಲಿ ” ಪ್ರೇತ ಜೀವನ ” ಮುಂದಿನ ಗತಿಯನ್ನು ಕುರಿತು ವಿಚಾರ ಮಾಡಿ ತೀರ್ಪು ಕೊಡುತ್ತಾರೆ.

ಆಗ ಪ್ರೇತ ಜೀವರು ಮಾಡಿರುವ ಪಾಪ – ಪುಣ್ಯ ಕರ್ಮಗಳಿಗನುಗುಣವಾಗಿಯೂ; ಅವನ ಉದ್ಧೇಶ್ಯವಾಗಿ ಅವನ ಪುತ್ರಾದಿಗಳು ಮಾಡಿರುವ ಧರ್ಮ ಕೆಲಸಗಳಿಗನುಗುಣವಾಗಿಯೂ; ಪ್ರೇತ ಜೀವನಿಗೆ ” ದೇವ – ಮನುಷ್ಯ – ನರಕಾದಿ ಜನ್ಮಗಳು ಬರುವಂತೆ ವಿಧಿಸುತ್ತಾರೆ. ಅದಕ್ಕೆ ಅನುಗುಣವಾಗಿ ಪ್ರೇತ ಜೀವನು ಮುಂದೆ ಆಯಾಯಾ ಜನ್ಮವನ್ನು ಪಡೆಯುತ್ತಾನೆ.

” ಯಮ ಮಾರ್ಗ ಅತ್ಯಂತ ಕಠಿಣ ”

ನರಕದಲ್ಲಿ ನಿತ್ಯ ಮತ್ತು ಅನಿತ್ಯ ಎಂಬ ಎರಡು ವಿಧ.

” ಅನಿತ್ಯ ನರಕ ” ಗಳು ಪಾತಾಳದ ಕೆಲ ಭಾಗದಲ್ಲಿರುವ ಗರ್ಭೋಧಕದ ಮೇಲೆ ದಕ್ಷಿಣ ದಿಕ್ಕಿನಲ್ಲಿದೆ. ಪಾಪಿಗಳು ಮಾತ್ರ ಅಲ್ಲಿಗೆ ಹೋಗುವರು. ಪಾಪಿಗಳ ವಿವರ :-

ಏಕಾದಶೀ – ಚಾತುರ್ಮಾಸ್ಯ – ಕೃಷ್ಣಾಷ್ಟಮೀ ವ್ರತಗಳನ್ನು ಮಾಡದವರು; ದಾನ ಮಾಡದವರು; ಪರ ದ್ರವ್ಯಾಪಹಾರಿಗಳು; ಪರಾಪವಾದ ನಿರತರೂ; ಅನ್ಯರನ್ನು ನಿಂದಿಸುವವರು; ವಿಹಿತ ಕರ್ಮಗಳಾದ ಸಂಧ್ಯಾವಂದನಾದಿ ಕರ್ಮ ಬಿಟ್ಟು ನಿಷಿದ್ಧ ಕರ್ಮಗಳಾದ ಮದ್ಯ ಮಾಂಸಗಳನ್ನು ತಿನ್ನುವವರು; ದೇವ ಬ್ರಾಹ್ಮಣರನ್ನು ನಿಂದಿಸುವವರು; ಅತಿಥಿ ಸೇವೆ ಮಾಡದವರು; ತಂದೆ – ತಾಯಿ – ಗುರುಗಳನ್ನು ಬೈಯುವವರು; ಕ್ರೂರಿಗಳು; ನೈವೇದ್ಯ ಮಾಡದೇ ತಿನ್ನುವವರು; ಪುಣ್ಯ ತೀರ್ಥಗಳಲ್ಲಿ ಗೌರವ ಬುದ್ಧಿ ಇಲ್ಲದವರು; ಪರರಿಗೆ ಅಪಕಾರ ಮಾಡಿ ಸಂತೋಷಿಸುವವರು; ಚಾಡಿಕೋರರು; ನಿಂದ್ಯಾ ವೃತ್ತಿ ಮಾಡುವವರು; ವೇದದಲ್ಲಿ ನಂಬಿಕೆ ಇಲ್ಲದ ಪಾಖಂಡಿಗಳು; ನಾಲಿಗೆ – ಗುಹ್ಯೇ೦ದ್ರಿಯ ವ್ಯಾಪಾರಸಕ್ತರು; ಅಧಿಕಾರ – ಅರ್ಹತೆ ಇದ್ದರೂ ಸತ್ಕರ್ಮ ಮಾಡದವರು; ಪತಿನಿಂದೆ ಮಾಡುವ ಸ್ತ್ರೀಯರು; ಪರ ಪುರುಷಾಸಕ್ತರು ಇವೇ ಮೊದಲಾದ ಸ್ತ್ರೀ – ಪುರುಷರು ಮಾಯಾ ಮಾರ್ಗದಲ್ಲಿ ಹೋಗಿ ” ಅನಿತ್ಯ ನರಕ ” ದಲ್ಲಿ ಬೀಳುವರು.

” ನಿತ್ಯ ನರಕ ” ವಾದರೂ ಪಂಚ ಕಷ್ಟವೆನಿಸಿದ ” ಅಂಧಂ ತಮಸ್ಸು”

ಶ್ರೀ ಮಹಾ ವಿಷ್ಣುವನ್ನೂ ಮತ್ತು ಶ್ರೀ ವಿಷ್ಣು ಭಕ್ತರನ್ನು ದ್ವೇಷಿಸುವ; ವೇದ ವೇದಾಂತಾದಿ ಸಚ್ಛಾಸ್ತ್ರಗಳನ್ನು ನಿಂದಿಸುವುದು ಇವುಗಳಿಂದಾಗಿ ಪುನಃ ಹಿಂದಿರುಗಿ ಬರಲಾಗದ ಐದು ಇಂದ್ರಿಯಗಳಿಗೆ ಉಪ ಲಕ್ಷಣಗಳಾದ ಸರ್ವೇಂದ್ರಿಯಗಳಿಂದಲೂ ದುಃಖ ಹೊತರು ಸುಖ ಲೇಶವೂ ಇಲ್ಲದ ” ಅಂಧಂ ತಮಸ್ಸ ” ನ್ನು ಹೊಂದುವರು.

ಶ್ರೀ ಯಮ ಮಾರ್ಗವು ” ವೈತರಣೀ ” ಹೊರತು ಪಡಿಸಿ 84000 ಯೋಜನವಿದೆ.

ಈ ಮಾರ್ಗವು ಪುಣ್ಯಶೀಲರಿಗೆ ಸುಖದಾಯಕವು.

ಈ ಮಾರ್ಗವು ಪಾಪಿಗಳಿಗೆ ದುಃಖದಾಯಕವಾಗಿದೆ. ಪಾಪಿಗಳು ವಸ್ತ್ರ ರಹಿತರಾಗಿ, ಬಾಯಾರಿಕೆಯಿಂದ ಒಣಗಿ ಹೋದ ಕಂಠ ತಾಳುಗಳ್ಳುವರಾಗಿ ಭಯದಿಂದ ದಾಟುತ್ತಾರೆ. ಶ್ರೀ ಯಮಧರ್ಮರಾಜರ ದೂತರು ಇವರನ್ನು ನಾನಾ ಆಯುಧಗಳಿಂದಲೂ; ಚಾಟಿಯಿಂದಲೂ ಹೊಡೆಯುತ್ತಾರೆ. ಏಟನ್ನು ತಾಳಲಾರದೆ ಜೋರಾಗಿ ಅರಚುತ್ತಾ ದುಃಖದಿಂದ ಶ್ರಮಿಸುತ್ತಾರೆ.

ಈ ದಾರಿಯಲ್ಲಿ ಕೆಲವೆಡೆ ಕೆಸರು, ಉರಿಯುತ್ತಿರುವ ಬೆಂಕಿ, ಚೆನ್ನಾಗಿ ಕಾದಿರುವ ಬೆಂಕಿ; ಮುಳ್ಳಿನ ಗಿಡಗಳು, ಕತ್ತಲೆ ಗುಹ, ಸೂಜಿಗಳನ್ನು ಹಾಕಿರುವ ಮಾರ್ಗದಲ್ಲಿ ನಡೆಯಬೇಕಾಗುತ್ತದೆ. ಕೆಲೆವೆಡೆ ಹುಲಿ – ಸಿಂಹಗಳ ಘರ್ಜನೆ ಕೇಳಿ ಬರುತ್ತದೆ.

ಈ ದಾರಿಯಲ್ಲಿ ಚೆನ್ನಾಗಿ ನಡೆಯದಿದ್ದರೆ ಹಗ್ಗದಿಂದ ಬಿಗಿದು; ಮೂಗಿನಲ್ಲಿ ಮೂಗುದಾರ ಹಾಕಿ ಅಂಕುಶಗಳಿಂದ ಚುಚ್ಚಿ ಶಸ್ತ್ರಾಸ್ತ್ರಗಳಿಂದ ಹೊಡೆಯುತ್ತಾ ಪಾಪಿಗಳನ್ನು ಸೆಳೆದೊಯ್ಯುವರು.

ಈ ಮಾರ್ಗದಲ್ಲಿ ನೀರು – ನೆರಳು ಇರುವುದಿಲ್ಲ.

” ಯಮ ಮಾರ್ಗವು ಯಾರಿಗೆ ಸುಗಮ ”

ಹರಿ ನಾಮವನ್ನು ಎಲ್ಲಾ ಕಾಲಗಳಲ್ಲಿಯೂ ಉಚ್ಛರಿಸುವವರಿಗೆ; ಯಾಗ – ತಪಸ್ಸು – ವ್ರತ – ದಾನಗಳು – ಗಂಗಾ ಸ್ನಾನ ಮಾಡುವವರಿಗೆ; ರಾಮನಾಮ ಸ್ಮರಿಸುವವರು; ಹರಿ ಭಕ್ತಿ ಉಳ್ಳವರಿಗೆ, ಹರಿ ಭಕ್ತರಿಗೆ ಈ ಮಾರ್ಗದಲ್ಲಿ ಯಾವ ಬಾಧೆಯೂ ಇಲ್ಲ.

Courtesy: FB “HARI SARVOTTHAM VAYU JEEVOTTHAM”

Advertisements

Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s